ಅಭಿಜಾತಸಾಹಿತ್ಯಮಾರ್ಗ
	
ಇದಕ್ಕೆ ಸಮಾನಾರ್ಥಕವಾದ ಕ್ಲಾಸಿ ಸಿಸಮ್ ಎನ್ನುವ ಪದ ಕ್ಲಾಸಿಕ್ಸ್ ಎಂಬ ಪದದಿಂದಲೇ ಉತ್ಪನ್ನವಾಯಿತೆನ್ನಬಹುದು. ಈ ಪದವನ್ನು ಸಾಹಿತ್ಯಕ್ಕೆ ಮೊಟ್ಟ ಮೊದಲು ಅನ್ವಯಿಸಿದವ ಕ್ರಿ.ಶ. ಎರಡನೆಯ ಶತಮಾನದಲ್ಲಿದ್ದ ರೋಮನ್ ವ್ಯಾಕರಣವಿದ್ವಾಂಸ ಔಲಸ್ ಗೆಲಿಯಸ್. ಸುಶಿಕ್ಷಿತರಿಗಾಗಿ ಬರೆದ ಸಾಹಿತ್ಯ (ಸ್ಕ್ರಿಪ್ಟರ್ ಕ್ಲಾಸಿಕಸ್) ಹಾಗೂ ಜನಸಾಮಾನ್ಯರಿಗೋಸ್ಕರ ಬರೆದ ಸಾಹಿತ್ಯ (ಸ್ಕ್ರಿಪ್ಟರ್ ಪೊಲೆಟೇರಿಯಸ್) ಎಂಬ ಎರಡು ಪ್ರಬೇಧಗಳನ್ನು ಆತ ಕಲ್ಪಿಸಿದಾಗ ಕ್ಲಾಸಿಕ್ಸ್ ಅಥವಾ ಅಭಿಜಾತಸಾಹಿತ್ಯ ಎನ್ನುವ ಮಾತು ಬಳಕೆಗೆ ಬಂತು. ಪಂಡಿತಪಾಮರರೆಂಬ ವರ್ಗಭೇದ ಸೂಚಿಸುವ ಈ ಪದ ಕಾಲಕ್ರಮೇಣ ಅತ್ಯುತ್ಕøಷ್ಟವಾದ ಸಾಹಿತ್ಯಕೃತಿ ಎನ್ನುವ ಅರ್ಥವ್ಯಾಪ್ತಿ ಪಡೆಯಿತು. ಹೊಸ ಹುಟ್ಟಿನ (ರೆನೆಸಾನ್ಸ್) ಕಾಲದಲ್ಲಿ ಗ್ರೀಕ್ ಹಾಗೂ ರೋಮನ್ ಮಹಾಗ್ರಂಥಗಳನ್ನು (ಕ್ಲಾಸಿಕ್ಸ್) ಅಭಿಜಾತಸಾಹಿತ್ಯವೆಂದು ಕರೆದರು. ಅಂದಿನಿಂದ ಅಭಿಜಾತಸಾಹಿತ್ಯ ಶೈಲಿ, ರಚನೆ, ಅಥವಾ ಒಟ್ಟಾರೆ ಪುರಾತನ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವೆನ್ನುವ ಅರ್ಥದಲ್ಲಿ ಬಳಸುವ ರೂಢಿ ಬೆಳೆದುಬಂದಿದೆ. ಪುರಾತನ ಗ್ರೀಕ್ ಸಾಹಿತ್ಯದಲ್ಲಿ ಕಾಣುವ ಅಭಿವ್ಯಕ್ತಿಯ ಪರಿಪೂರ್ಣತೆ, ಹಾಗೂ ಕಾಲ-ದೇಶಗಳನ್ನು ಮೀರಿ ನಿಲ್ಲುವ ಮಾನವೀಯ ಮೌಲ್ಯಗಳನ್ನು ಗಮನಿಸಿ ಕೇವಲ ಗ್ರೀಕ್ ಸಾಹಿತ್ಯವನ್ನು ಮಾತ್ರ ಅಭಿಜಾತಸಾಹಿತ್ಯವೆಂದು ಕರೆಯಲಾಯಿತು. ಕ್ರಿ.ಪೂ.ನಾಲ್ಕನೆಯ ಶತಮಾನದಿಂದ ಹಿಡಿದು ಕ್ರಿ.ಶ. 20ವರೆಗಿನ ಕಾಲದ ಗ್ರೀಕ್ ಸಾಹಿತಿಗಳು ಸಹ, ತಮಗಿಂತ ಪೂರ್ವದಲ್ಲಿ ಆಗಿಹೋದ, ಅಂದರೆ ಹೋಮರ್‍ನಿಂದ ಪ್ಲೇಟೋವರೆಗಿನ ಪುರಾತನ ಸಾಹಿತಿಗಳ ಪರಂಪರೆಯನ್ನು ಅನುಸರಿಸಿ ಅದನ್ನು ಪುರುದ್ದೀಪನೆಗೊಳಿಸುವ ಪ್ರಯತ್ನ ಮಾಡಿದರು. ಆದರೆ ಹೊಸಹುಟ್ಟಿನ ಕಾಲದ ಮಾನವತಾವಾದಿಗಳು ಪೆರಿಕ್ಲೀಸ್ ಯುಗದ ಗ್ರೀಕ್ ಸಾಹಿತ್ಯ ಹಾಗೂ ಅಗಸ್ಟಸ್ ಸೀಸûರ್ ದೊರೆಯ ಹೊನ್ನಿನ ಯುಗದ ರೋಮನ್ ಸಾಹಿತ್ಯಗಳಲ್ಲಿನಕಲೆ ಹಾಗೂ ದರ್ಶನದ ಅಂಶಗಳನ್ನು ಗುತುತಿಸಿ, ಅವುಗಳನ್ನು ಅನುಕರಣೀಯ, ಪರಿಪೂರ್ಣ ಮೌಲ್ಯಗಳೆಂದು ಪರಿಗಣಿಸುವ ಸಂಪ್ರದಾಯವನ್ನು ಸ್ಥಾಪಿಸಿದರು.
	
ಪುರಾತನ ಗ್ರೀಕರಿಗೆ, ಪ್ರಕೃತಿಯ ಶಕ್ತಿಸ್ವರೂಪಿಗಳಾದ ತಮ್ಮ ದೇವತೆಗಳೆಲ್ಲರೂ ಮನುಷ್ಯ ರೂಪವಾಗಿಯೇ ಕಾಣಿಸುತ್ತಿದ್ದರು. ದೇವರುಗಳನ್ನು ಪೂಜಿಸಿ, ಪ್ರಾರ್ಥಿಸುವಾಗ ಮತ್ತು ಕಲೆಯ ವಸ್ತು ಪ್ರತಿರೂಪಗಳೆಂದು ಎಣಿಸುವಾಗ, ಅವರನ್ನು ಮನುಷ್ಯರೆಂದೇ ಊಹಿಸಿಕೊಳ್ಳುತ್ತಿದ್ದರು. ಬಾಹ್ಯರಚನೆ ಅಥವಾ ಸ್ವರೂಪದ ಸರ್ವಾಂಗೀಣ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ಕಲಾರಚನೆಯಲ್ಲಿ ಪರಿಮಾಣ ಔಚಿತ್ಯ, ಸಮರೂಪತೆ, ಸಮತೂಕ, ವ್ಯವಸ್ಥೆ, ಅಭಿವ್ಯಕ್ತಿಯ ಸಂಯಮ ಮುಂತಾದ ಅಂಶಗಳಿಗೆ ಗಮನವಿತ್ತರು. ಗ್ರೀಕ್ ಸಾಹಿತ್ಯ, ಲಲಿತಕಲೆ, ಹಾಗೂ ವಾಸ್ತುಶಿಲ್ಪಗಳಲ್ಲಿನ ಗುಣವಿಶೇಷಗಳನ್ನು ಗುರುತಿಸಿ ಅಂಥ ಮೂಲಸೂತ್ರಗಳನ್ನು ಅನುಸರಿಸಬೇಕೆನ್ನುವ ಸಂಪ್ರದಾಯವನ್ನು ಕ್ಲಾಸಿಸಿಸಮ್ ಅಥವಾ ಅಭಿಜಾತಸಾಹಿತ್ಯ ಮಾರ್ಗವೆಂದು ಕರೆಯುವ ವಾಡಿಕೆ.			(ಎಚ್.ಕೆ.ಆರ್.)
	
`ಕ್ಲಾಸಿಕಲ್, `ರೊಮ್ಯಾಂಟಿಕ್-ಈ ಶಬ್ದಗಳನ್ನು ಪರಸ್ಪರ ವೈದೈಶ್ಯದಿಂದ ವಿವರಿಸುವುದು ವಾಡಿಕೆ. ಆದರೆ ಇದಾದರೂ ಸಂಪೂರ್ಣವಾಗಿ ಯಶಸ್ವಿಯಲ್ಲ. ಇಂಗ್ಲೆಂಡಿನ `ರೊಮ್ಯಾಂಟಿಕ್ ಡಿಸೈನರ್ ಅಥವಾ ರೊಮ್ಯಾಂಟಿಕ್‍ನ ಪುನಶ್ಚೇತನದ ಶಿಲ್ಪಗಳಲ್ಲಿ ಒಬ್ಬನಾದ ವಿಲಿಯಂ ಎಡ್ರ್ವ್‍ವರ್ತ್‍ನ `ಓಡ್ ಟು ಡ್ಯೂಟಿ ಅಂಥ ಕವನ `ಕ್ಲಾಸಿಕಲ್ ಎನ್ನಬೇಕಾಗುತ್ತದೆ; ಪ್ರಾಚೀನ ಗ್ರೀಸಿನ ಯೂರಿಪಿಡೀಸನ್ ನಾಟಕಗಳಲ್ಲಿ `ರೊಮ್ಯಾಂಟಿಕ್ ಅಂಶಗಳಿವೆ.
	
ಪಾಶ್ಚಾತ್ಯ ವಿಮರ್ಶಕರು (ಮುಖ್ಯವಾಗಿ ಇಂಗ್ಲಿಷ್ ವಿಮರ್ಶಕರು) `ಕ್ಲಾಸಿಕಲ್ ಎನ್ನುವುದಕ್ಕೆ ಹಲವು ಲಕ್ಷಣಗಳನ್ನು ಸೂಚಿಸಿದ್ದಾರೆ. ಚ್ಯಾಡೆನ್ಸ್ (ಸಮತೋಲಿನ), ಯೂನಿಟಿ (ಐಕ್ಯ) ಪ್ರಪೋರ್ಷನ್ (ಪ್ರಮಾಣಬದ್ಧತೆ) ರಿಸ್‍ಟ್ರೆಂಟ್ (ಸಂಯಮ), ನೊಬ್ಲ್ ಸಿಂಪ್ಲಿಷಿಟಿ (ಉದಾತ್ತ ಸರಳತೆ), ಕ್ವಯಟ್ ಗ್ರ್ಯಾಂಜ್ (ಸೌಮ್ಯ ಭವ್ಯತೆ), ಫಾರ್ಮಲ್ ಡಿಸಿಪ್ಲಿನ್ (ರೂಪದ ಶಿಸ್ತು), ಅಬ್‍ಜೆಕ್ಟಿವಿಟಿ (ವಸ್ತುನಿಷ್ಠತೆ) ಈ ಎಲ್ಲ ಲಕ್ಷಣಗಳನ್ನು ಕ್ಲಾಸಿಕಲ್ ಸಾಹಿತ್ಯಮಾರ್ಗದೊಂದಿಗೆ ಜೋಡಿಸಲಾಗಿದೆ.
	
ಹಲವು ದಶಕಗಳಿಂದ `ಅಭಿಜಾತ ಸಾಹಿತ್ಯ, `ರೊಮ್ಯಾಂಟಿಕ್ ಸಾಹಿತ್ಯ ಎಂಬ ಪರಿಕಲ್ಪನೆಗಳನ್ನು ಬಳಸುತ್ತಿದ್ದರೂ ಇದಕ್ಕೆ ಅತಿಯಾದ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ. ಉಪಯುಕ್ತವಾದ ಪರಿಕಲ್ಪನೆಗಳೆಂದಷ್ಟೆ ಇವಕ್ಕೆ ಮನ್ನಣೆ. ತನ್ನ `ಆಫ್ಟರ್ ಸ್ಟೇಂಜ್ ಗಾಡ್ಸ್ (1934) ಪುಸ್ತಕದಲ್ಲಿ ಈ ಪರಿಕಲ್ಪನೆಗಳನ್ನು ಕುರಿತು ಬರೆಯುತ್ತ, ಕೃತಿರಚನೆ ಮಾಡುತ್ತಿರುವಾಗ ಯಾವ ಕವಿಯೂ ತಾನು `ಕ್ಲಾಸಿಕಲ್ ರೀತಿಯಲ್ಲಿ ಬರೆಯುತ್ತಾನೆ. `ರೊಮ್ಯಾಂಟಿಕ್ ರೀತಿಯಲ್ಲಿ ಬರೆಯುತ್ತಾನೆ ಎಂದು ಯೋಚಿಸುವುದಿಲ್ಲ. ಈ ಪದಗಳನ್ನು ಬಳಸುವಾಗ ಬಳಸುವವರ ಮನಸ್ಸಿನಲ್ಲಿ ಅವರ ಗ್ರಹಿತೆಯಂತೆ ಮಾನವೀಯ ಮೌಲ್ಯಗಳೆಲ್ಲ ಇರುತ್ತವೆ. ಪರಿಕಲ್ಪನೆಗಳ ಚರ್ಚೆ ಸರಳವಲ್ಲ ಎಂದ.											
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ